ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಸಂಚರಿಸುವ ಎಲ್ಲ ಯೆಲ್ಲೋ ಬೋರ್ಡ್ ಕ್ಯಾಬ್ಗಳಿಗೆ (Yellow Board Cab) ಫೇರ್ ಮೀಟರ್ (Meter) ಅಳವಡಿಸುವುದನ್ನು ಸಾರಿಗೆ ಇಲಾಖೆ (Transport Department) ಕಡ್ಡಾಯಗೊಳಿಸಿದೆ. ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್ ಕಂಪನಿಗಳು ಮತ್ತು ಕೆಲವು ಚಾಲಕರು ಪ್ರಯಾಣಿಕರಿಂದ ಮನಸೋಇಚ್ಛೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದಕ್ಕೆ ಬ್ರೇಕ್ ಹಾಕಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಈ ಹಿಂದೆ ಜಾರಿಗೆ ತಂದಿದ್ದ ‘ಒನ್ ಸಿಟಿ ಒನ್ ಫೇರ್’ ನಿಯಮವನ್ನು ಯಾವುದೇ ಸಂಸ್ಥೆಗಳು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ, ಸಾರಿಗೆ ಆಯುಕ್ತರ ಸೂಚನೆ ಮೇರೆಗೆ ಈ ಹೊಸ ನಿಬಂಧನೆ ಜಾರಿಗೊಳಿಸಲಾಗಿದೆ. ನೂತನ ನಿಯಮದಂತೆ ಸಾಮಾನ್ಯ ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳು ಮಾತ್ರವಲ್ಲದೆ ಏರ್ಪೋರ್ಟ್ ಕ್ಯಾಬ್ಗಳಿಗೂ ಮೀಟರ್ ಕಡ್ಡಾಯವಾಗಲಿದೆ. ವಾಹನಗಳಲ್ಲಿ ಫೇರ್ ಮೀಟರ್ ಇಲ್ಲದಿದ್ದರೆ ಹೊಸ ಯೆಲ್ಲೋ ಬೋರ್ಡ್ ಕ್ಯಾಬ್ಗಳ ನೋಂದಣಿ ಪ್ರಕ್ರಿಯೆ ನಡೆಯುವುದಿಲ್ಲ ಹಾಗೂ ಹಳೆಯ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (FC) ನವೀಕರಣ ಸಹ ಸಿಗುವುದಿಲ್ಲ.
ಸರ್ಕಾರದ ಈ ನಿರ್ಧಾರವನ್ನು ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ನಗರದ ಸಾರ್ವಜನಿಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ದಿನದ ಸಮಯ, ವಾತಾವರಣ ಅಥವಾ ಮಳೆಯ ನೆಪ ಹೇಳಿ ಓಲಾ, ಉಬರ್, ರ್ಯಾಪಿಡೋ ಮತ್ತು ನಮ್ಮ ಯಾತ್ರಿ ಮುಂತಾದ ಆ್ಯಪ್ಗಳ ಮೂಲಕ ದರ ಏರಿಕೆ ಮಾಡುತ್ತಿದ್ದ ಸಂಸ್ಥೆಗಳ ಕಿರುಕುಳಕ್ಕೆ ಇದರಿಂದ ಮುಕ್ತಿ ಸಿಗಲಿದೆ. ಕ್ಯಾಬ್ಗಳಿಗೆ ಮೀಟರ್ ಅಳವಡಿಸುವುದರಿಂದ ಪ್ರಯಾಣಿಕರಿಗೆ ನ್ಯಾಯಯುತ ಹಾಗೂ ನಿಖರವಾದ ಪ್ರಯಾಣ ದರ ನಿಗದಿಯಾಗಲಿದ್ದು, ಚಾಲಕರು ಮತ್ತು ಪ್ರಯಾಣಿಕರಿಬ್ಬರಿಗೂ ಅನುಕೂಲವಾಗಲಿದೆ.
